Thursday, May 2, 2019

ಹೃದಯಾಂತರಾಳದ ಮಾತು (ವಿಶ್ವನಾಥ ಬಡಿಗೇರ - ನವೆಂಬರ್ ೨೦೦೩)



ಬಳಲಿದ್ದೇನೆ…
ಹಾಂ, ಗೆಳತಿ
ನಿಜವಾಗಿಯೂ ಬಳಲಿದ್ದೇನೆ;

ಈ ಇಪ್ಪತ್ತೆರಡು ವಸಂತಗಳನ್ನು ನೋಡಿ
ಕಷ್ಟ ಸುಖಗಳ ಮಿಶ್ರಣದ ಜೀವನದಿ
ಸೋಲು ಗೆಲುವುಗಳ ಹಿಂದೆ ಓಡಿಓಡಿ,
ಒಂದು ಗೆಲುವಿಗಾಗಿ ಓಡಿಓಡಿ
ಗೆದ್ದು  ಸಂಭ್ರಮಿಸುವುದರಲ್ಲಿ ಬರುವ
ಸಮಸ್ಯೆಯ ಸರಮಾಲೆಯ  ಬೆಟ್ಟಗಳಡಿ,
ಕಾಣುವ ಪ್ರತಿ ಸುಂದರ ತರುಣಿಯ
ಕಣ್ಣ ಕಾಂತಿಯಲಿ ಜೀವನ ಸಂಗಾತಿಯ
ರೂಪ ಕಾಣುವ ಸುಮಧುರ ಹುಡುಕಾಟದಲ್ಲಿ,
ಎಲ್ಲರೂ ಜೊತೆಗಿದ್ದು, ಎಲ್ಲವೂ ಸರಿಯಾಗಿದ್ದು
ಮನದ ಯಾವುದೋ ಒಂದು ಮೂಲೆಯ
ಏಕಾಂಗಿ ಎಂಬ ವೇದನೆಯ  ಕಲ್ಪನೆಗಳಿಗಾಗಿ,
ಯೌವನದ ಮಹಾನ್  ಕಾಡಲ್ಲಿ
ಹೊತ್ತಿ ಉರಿಯುವ ಕಾಮದ ಕಾಡ್ಗಿಚ್ಚಿನ
ಶಾಖದ ಬೇಗೆಯಲಿ ಬೆಂದು,
ಬರೀ ಕತ್ತಲೆ ಎನಿಸುವ ಭವಿಷ್ಯದ
ಹಾದಿಯಲ್ಲಿ ಬೆಳ್ಳಿ ದೀಪದ ಬೆಳಕ
ಹುಡುಕಾಡುವ ನನ್ನ ಹೋರಾಟದಲ್ಲಿ.

ಆ ನಿನ್ನ ತುಟಿಯ ಮುಗುಳು ನಗೆಯೆಲ್ಲಿ
ಆ ನಿನ್ನ ಕಂಗಳ ಕಾಂತಿಯ ಹೊಳಪಲ್ಲಿ
ಆ ನಿನ್ನ ಆತ್ಮವಿಶ್ವಾಸ ತುಂಬುವ ಮಾತುಗಳಲ್ಲಿ
ಈ ನನ್ನ ಬಳಲಿದ ಜೀವಕ್ಕೆ ಜೀವವಾಗಿ
ಈ ನನ್ನ ನಿದ್ರಾವಸ್ಥೆಯ ಚಿರತೆಯ ಮನಕ್ಕೆ
ಬಡಿದೆಬ್ಬಿಸಿ, ಹೋರಾಟಕ್ಕೆ ಅಣಿಗೊಳಿಸುವ ಶಕ್ತಿ ಇದೆ.

ತಾಯಿಯ ಮಡಿಲಲ್ಲಿ ಜಗದ ಜ್ಞಾನವಿಲ್ಲದೆ
ಮಲಗಿರುವ ಮುಗ್ಧ ಮಗುವಂತೆ
ಗಾಢನಿದ್ರೆಯಲ್ಲಿ ಇರುವ ಶ್ರಮಜೀವಿಯಂತೆ
ನಿರ್ಭಯ ನಿರ್ಭೀಡೆಯಿಂದ ನಿನ್ನ ಮಡಿಲಲ್ಲಿ
ಕ್ಷಣಕಾಲ ಕಣ್ಮುಚ್ಚಿ ವಿಶ್ರಮಿಸಿ, ಮತ್ತೆ ಉತ್ಸಾಹದ
ಚಿರತೆಯಾಗಲು ನಿನ್ನ ಸಮ್ಮತಿಯಿದೆಯೇ ಯುವಗೆಳತಿ ?

Wednesday, July 2, 2008

ಆ ರಾತ್ರಿ (ವಿಶ್ವನಾಥ ಬಡಿಗೇರ - ಜನೇವರಿ ೨೦೦೦)



ಕಂಡೆನು ಕಂಡೆನು ಅವಳೆದೆಯ ಭಾವನೆಯಾ
ಕಂಡೆನು ಕಂಡೆನು ನನ್ನ ಪ್ರೀತಿ ನೈದಿಲೆಯಾ
ನನ್ನ ಕಣ್ಣ ಕಾಂತಿಯಲಿ, ಆ ರಾತ್ರಿ ಬೆಳಕಿನಲಿ
ಬೀಸೋ ತಂಗಾಳಿಯಲಿ, ಚಲಿಸೋ ಆ ಚಂದ್ರನಲಿ ll


ಕಣ್ಣುಕಣ್ಣುಗಳ ಆ ಯುದ್ಧ, ನೋಡದವನು ಪೆದ್ದ
ನನ್ನದೆಯ ಭಾವನೆಗೆ ಅವಳ ಕಣ್ಣ ಸ್ಪಂದನ
ಅವಳ ಪ್ರೀತಿ ಕಲ್ಪನೆಗೆ ನನ್ನ ಪ್ರೀತಿ ಚಂದನ
ನೋಡು ಬಾ ಓ ಗೆಳೆಯ ಈ ಪ್ರೀತಿ ಮಂಥನ ll


ಮುತ್ತಂತಾ ಮಾತಾಡಿದಳು ಹಾಲಚೆಲ್ಲಿ ನಕ್ಕಳು
ಸುತ್ತಿಸುತ್ತಿ ಬೇಡಿದಳು ದೇವಕೃಪೆ ಇರಲೆಂದು
ನನ್ನಂತೆ ಅವಳಲ್ಲವೇ, ಅವಳಂತೆ ನಾನಲ್ಲವೇ
ನನ್ನ ಪ್ರೀತಿ ದೇವತೆ ಅವಳು ನನ್ನದೆಗೆ ಬಾರಳೇ ll


ಈ ಭೂಮಿ ನನ್ನಾನೆಲೆ, ಆಕಾಶ ನನಗಾಸರೆ
ಈ ಸೃಷ್ಟಿ ನನ್ನ ತಾಯಿ, ಸಂಕುಲವೇ ನನ್ನಾ ಬಂಧು
ನೀ ಬಾರೆಯಾ ಗೆಳತಿ ಈ ನನ್ನ ಮನೆಗೆ
ನಿನಗಾಗಿ ಕಾಯುವೆನು ಪ್ರೀತಿಗುಡಿ ಸೇವಕನಾಗೆ ll

Tuesday, July 1, 2008

ಬಿದಿಗೆ ಚಂದ್ರಮಾ (ವಿಶ್ವನಾಥ ಬಡಿಗೇರ - ಜನೇವರಿ ೨೦೦೩)



ನನ್ನ ಪ್ರೀತಿ ಹೃದಯದ ಗುಡಿಗೆ
ನೀ ಬೆಳ್ಳಿಬೆಳಕಿನ ದೀವಿಗೆ
ಹೃದಯದ ಚಿಲಿಪಿಲಿ ಪ್ರೀತಿ ನುಡಿಗೆ
ಕಾರಣ ನಿನ್ನ ನಗೆಯ ಹೊಸಬಗೆ ll

ಪ್ರಕೃತಿ ಸ್ವರೋಪಿ ನೀ ನನ್ನ ಚೇಲುವೆ
ಬಣ್ಣದ ಕಾಮನ ಬಿಲ್ಲಿನಂತ ಹುಬ್ಬುಗಳಿವೆ
ರವಿ ಚಂದ್ರರಂತ ನೇತ್ರಗಳು ಸಾಲವೆ
ಹೋಲಿಸಲೆನಗೆ ನಿನ್ನ ನನ್ನೊಲವೆ ll

ನೀ ನುಡಿದರೆ ಎನ್ನ ಹೃದಯದಿ ಸಂಗೀತ
ಹಿತ ನುಡಿದರೆ ಸುಮಧುರ ಶುಶ್ರಾವ್ಯ ಗೀತ
ಮೆಲುನಗೆಯಲಿ ಬಿದಿಗೆ ಬೆಳಕಿನ ಮೆಳೆತ
ಅದಕೆ ಹೃದಯದಿ ನಿನಗಾಗಿ ನಿತ್ಯ ಸ್ವಾಗತ ll

ಮುತ್ತಿಡುವ ನಿನ್ನ ಮುಂಗುರುಳ ನೋಡಿ ಒಮ್ಮೊಮ್ಮೆ
ಚುಂಬಿಸುವಾಸೆ ನಿನ್ನ ಪ್ರತಿ ಕ್ಷಣಕ್ಕೊಮ್ಮೆ
ಮಧು ತುಂಬಿದ ಅಧರಗಳೇನು ಕಡಿಮೆ
ನನ್ನ ಯೌವನಕೆ ಮತ್ತೇರಿಸುವ ರಮ್ಮೆ ll

ಗೆಳತಿ, ಹಸಿದೆನಗೆ ಅಮೃತ ಕಲಶವಾಗಿ ಬಾ
ಬಾಳ ಎದುರಿಸಲು ಜೊತೆಗಾರಳಾಗಿ ಬಾ
ಭವಿಷ್ಯ ಬೆಳಗೊ ಗುರುವಾಗಿ ಬಾ
ಹೃದಯ ಬೆಳಗಲು ಚಂದ್ರಮವಾಗಿ ಬಾ ll


Thursday, April 3, 2008

ಅಜ್ಜಿ (ಅಮ್ಮ)


ನನ್ನ ಬಾಳ ಭುವಿಯನ್ನು,
ಹಸನು ಮಾಡಿ,
ಉತ್ತಿ, ಬೀಜ ಬಿತ್ತಿ,
ನೀರ ಹಾಯಿಸಿ,
ಸಾಕಿ ಸಲುಹಿ,
ಮರವಾಗಿ ಹೂ ಬಿಡುವುದನ್ನು ನೋಡಿ,
ಹೂ ಕಾಯಿಯಾಗಿ ಹಣ್ಣಾಗುವ ಮೊದಲೆ,
ಮರೆಯಾದ ದೇವತೆ.


Thursday, March 6, 2008

ಸುರಿಮಳೆ (ವಿಶ್ವನಾಥ ಬಡಿಗೇರ - ೩೦ನೇ ಜನೇವರಿ ೨೦೦೧)






ಮಳೆ ಬಂತು ಮಳೆ ಬಂತು
ಕಷ್ಟಗಳ ಹನಿ ಹನಿ ತಂತು
ನಡುನಡುವೆ ಬರಸಿಡಿಲೂ ಬಂತು
ಆಹ್ವಾನವಿತ್ತು ಎದುರಿಸುವೆ ನಾ ನಿಂತು ll


ಓ ಮಳೆ ಹನಿಯೇ ನೀ ಕೇಳು
ನಿನ್ನ ಮನದಿಚ್ಛೆಯಂತೆ ನೀ ಬೀಳು
ಬಿದ್ದು ನನ್ನ ಮನದ ಕಪ್ಪೆ ಚಿಪ್ಪೊಳು
ಮುತ್ತಾಗಿ ಶೃಂಗರಿಸುವೆ ನನ್ನ ಬಾಳು ll


ಬಾಳ ಭುವಿಯಲ್ಲಿ ನಾನೊಂದು ಬೀಜ
ನಿನ್ನ ರಭಸದಲಿ ಒಮ್ಮೊಮ್ಮೆ ತೇಲುವುದು ಸಹಜ
ಕಲ್ಲು ದಿನ್ನೆಗಳ ಸಹಾಯವಿದೆ ನೀ ತಿಳಿ ನಿಜ
ನಿನ್ನ ಆ ಹನಿಹನಿಯಿಂದ ಬೆಳೆಯುವೆ ನೋಡು ಮಜ ll


ನಾನೊಂದು ವಿರೂಪದ ಶಿಲೆ
ನಿನ್ನ ಕಷ್ಟದ ಹೊಡೆತಗಳಿಂದಲೆ
ನಾನಾಗಬಲ್ಲೆನೆ ಒಂದು ನೈಜಕಲೆ
ಸಿಗುವುದೇ ರವಿಯಿರುವವರೆಗೆ ನೆಲೆ ll


ಸುರಿಮಳೆಯೆ ಬರಬರನೆ ನೀ ಸುರಿ
ಆ ನಿನ್ನ ರಭಸದ ಪರಿ
ಆಗಲಿ ನನ್ನ ವಿಜಯದ ನಗಾರಿ
ವಿಜಯಿಯಾಗಿ ನೋಡುವೆ ನಾನೊಂದು ಸಾರಿ ll


Tuesday, February 26, 2008

ಕೋರಿಕೆ (ವಿಶ್ವನಾಥ ಬಡಿಗೇರ - ೧೪ನೇ ಅಕ್ಟೋಬರ್ ೨೦೦೩)



ಗೆಳೆಯಾ,
ನಿನ್ನ ಮುಳ್ಳ ಹಾದಿಯ ಜೀವನಕೆ
ನಾ ಮಲಗಿ ನಿನಗೆ ಹಾದಿಯಾಗಬೇಕೆ
ಮುಳ್ಳು ಚುಚ್ಚಿಸಿಕೊಂಡು ಸುಮ್ಮನಿರಬೇಕೆ
ರಕ್ತ ಸುರಿಸಬೇಕೆ,
ಓಕೆ.


ಆದರೆ,
ದಾಟಿದ ಮೇಲೆ ನನ್ನ ಮರೆಯಬೇಡ;
ಮರೆತರೂ... ನನ್ನ ಬಳಸಿಕೊಂಡೆ ಎಂದು ಖುಷಿಪಡು!
ಮರೆತರೂ...ನನ್ನ ಬಳಸಿಕೊಂಡೆ ಎಂದು ನಗಬೇಡ!!
ಏಕೆಂದರೆ,
ಆ ನೋವ ನಾ ಸಹಿಸಲಾರೆ!!??


Monday, February 25, 2008

ಸ್ನೇಹ (ವಿಶ್ವನಾಥ ಬಡಿಗೇರ - ೧೦ನೇ ಜನೇವರಿ ೨೦೦೩)



ಪ್ರತಿ ಮನದಿ ನಿನಗಿದೆ ಸಿಂಹಾಸನ, ಸ್ನೇಹ
ಪ್ರತಿ ಮೊಗದಿ ನಿನ್ನದೂ ಛಾಯೆ, ಸ್ನೇಹ
ಪ್ರತಿ ಜೀವಿಯ ಉಸಿರಲ್ಲೊಂದು ಹೆಸರು, ಸ್ನೇಹ
ನೀನಿರದ ಜೀವಿಯಲಿ ನಿನ್ನ ಕಾಣುವಾಸೆ, ಸ್ನೇಹ ll


ವಿಷಭರಿತ ವಸ್ತುವಲ್ಲ, ಸ್ನೇಹ
ಅಮೃತ ಭರಿತ ಸಾಗರ, ಸ್ನೇಹ
ಕಪಟಿಯ ಆಯುಧವಲ್ಲ, ಸ್ನೇಹ
ನೊಂದವನ ಗೆಲುವು, ಸ್ನೇಹ ll


ಜಗ ಸುಡುವ ಕಾಡ್ಗಿಚ್ಚಲ್ಲ, ಸ್ನೇಹ
ಮುದ ನೀಡುವ ತುಪ್ಪದ ದೀಪ, ಸ್ನೇಹ
ವಿರೋಧಿಯ ಕುಹಕದ ನಗೆಯಲ್ಲ, ಸ್ನೇಹ
ಮೃದು ಮನದ ಕಂದನ ನಗೆ, ಸ್ನೇಹ ll


ಶ್ರೇಯಸ್ಸಿಗಾಗಿ ಬಳಸುವ ದುರ್ಬಳಕೆಯಲ್ಲ, ಸ್ನೇಹ
ಯಶಸ್ಸಿನ ಸೂತ್ರಗಳ ಗ್ರಂಥ, ಸ್ನೇಹ
ಅಸಮತೋಲನದ ಚಂಡಮಾರುತವಲ್ಲ, ಸ್ನೇಹ
ಸಂಜೆಯ ತಂಗಾಳಿಯ ಹಿತ, ಸ್ನೇಹ ll


ತಲೆಸುಡುವ ಬಿಸಿಲಲ್ಲ, ಸ್ನೇಹ
ಮುಂಜಾವಿನ ಮುಂಬೆಳೆಕು, ಸ್ನೇಹ
ಕತ್ತೆಯ ಕಿರುಚಾಟವಲ್ಲ, ಸ್ನೇಹ
ಕೋಗಿಲೆಯ ಸಂಗೀತಗೋಷ್ಟಿ, ಸ್ನೇಹ ll


ಕೃತಕ ಕಥೆಯಲ್ಲ, ಸ್ನೇಹ
ನೈಜತೆಯ ಕೃತಿ, ಸ್ನೇಹ
ಬರೀ ಜೊತೆಗಾರಿಕೆಯಲ್ಲ, ಸ್ನೇಹ
ಹೃದಯ ಹೊಂದಣಿಕೆ, ಸ್ನೇಹ ll


ಪ್ರತಿ ದಿನ ಕ್ಷಣ ಹೇಳುತುದೆ ಸ್ನೇಹ
ಎನ್ನೆದೆಗೆ, ಮಾಡು ಹಿತಮಿತವಾದ ಸ್ನೇಹ
ಪ್ರತಿ ಹೃದಯದಿ ಬಿತ್ತು ಬೀಜವಾಗಿ, ಸ್ನೇಹ
ವಿಶ್ವಾಸದ ಜಲಸುರಿದು, ಬೆಳೆಸು ಸ್ನೇಹ ll


Tuesday, February 5, 2008

ನೆನಪುಗಳು


ಜೀವನವೆಂಬ ಸುಂದರ ಪ್ರಯಾಣದ,
ಕಾಲವೆಂಬ ಮಹಾನ್ ಹೆದ್ದಾರಿಯಲ್ಲಿ,
ನಾವು ಸಾಗಿಬಂದ ಯಶಸ್ಸಿನ
ಮೈಲುಗಲ್ಲುಗಳು!!!


Thursday, January 24, 2008

ನಿರೀಕ್ಷೆ (ವಿಶ್ವನಾಥ ಬಡಿಗೇರ - ಜೂನ್ ೨೦೦೨)


ಮುಗಿಲ ಕಡೆ ಮುಖ ಮಾಡಿ ನಿಂತ
ಆತನಿಗೆ ಅನಿಸಿತ್ತು ಕಳಿಸುವುದು ದಿಗಂತ
ಒಂದಾದರೂ ಹೊಳೆಯೊ ನೀರಿನ ಮುತ್ತ
ಬೀಜ ಮೊಳೆತು, ಬೆಳೆದು ಕೊಡುವುದು ತುತ್ತ ll


ಮುಗಿಲ ಮೋಡದಿ ಜಾರಿದ ಆ ಹನಿ ಮುತ್ತು
ಪಾರ್ಥನ ಬ್ರಹ್ಮಾಸ್ತ್ರದ ರಭಸವ ಮೀರಿಸುವಂತಿತ್ತು
ಲೀಲಾಜಾಲವಾಗಿ ತೇಲುತ್ತ ಬರುತ್ತಲಿತ್ತು ಹೊತ್ತು ತುತ್ತು
ಶಿಲೆಯಾದ ಆತ ಭವಿಷ್ಯದ ನಿರೀಕ್ಷೆ ಹೋತ್ತು ll


ಬಾ ಓ ಮಳೆ ಹನಿಯೆ ಬಾ ಇತ್ತ
ಮುತ್ತ ಹನಿ ಕಾಣದೆ ಆಸೆ ಕಮರಿತ್ತ
ಬರಸಿಡಿಲು ಬಡಿದರೊ ನನ್ನ ದೃಷ್ಟಿ ನಿನ್ನತ್ತ
ಹೇಳುತ್ತಲಿತ್ತವನ ಮನ ದೊರೆಯಲಿದೆ ತುತ್ತ ll


ಬೀಜ-ನೀರ ಹನಿಯ ಸಮಾಗಮದ ಹೊತ್ತು
ಮರೆಸಿತ್ತವಗೆ ಜೀವನದೆಲ್ಲ ಆಪತ್ತು
ಎತ್ತಿಂದಲೋ ಬಂದ ಗಾಳಿ ಆ ಹನಿ ಮತ್ತೇತ್ತಲೋ ಹಾರಿಸಿತ್ತು
ಇದೇನಾ ವಿಧಿ ವಿಕೋಪದ ಕರಾಮತ್ತು ll


ಆತ ಆಸೆಹೊತ್ತು ಶಿಲೆಯಾಗಿ ಅತ್ತ
ಕಣ್ಣಹನಿ ಧಾರೆಯಲ್ಲೊ ಆಗದುಲಿಯಿತು ಬೀಜ ಭತ್ತ
ಶಿಲೆಯಾಗಿರುವನಾತ ಮುಖಮಾಡಿ ದಿಗಂತದತ್ತ
ಕಾಯುತ್ತಿರುವನಾತ ಮೋಡದಿ ಜಾರೋ ಹನಿಮುತ್ತ ll

ನಂದೂ ತಪ್ಪಿಲ್ಲಾರೀ... (ವಿಶ್ವನಾಥ ಬಡಿಗೇರ - ಜನೇವರಿ ೨೦೦೩)





ನವಿಲ ನಾಟ್ಯದಲಿ ಬಂದಳಾ ಕುವರಿ
ನಗುತ ಮಾತಾಡಿಸಿದಳೆ ಕೆನ್ನೆ ಸವರಿ
ಕೆನ್ನೆಗೆನೋ ಹತ್ತಿತ್ತು ಹೇಳೋದು ಮರೆತೆ ಸಾರಿ
ಮದುವೆಲಿ ಈ ರೀತಿ ಮಾತಾಡಿದ್ದು ಸರಿಯೇನ್ ಹೇಳರಿ ll


ಕಡೆಗೂ ಹೋದಳಲ್ಲ ಸುಂದರಿ ಅಂದದ್ದೆ ಸರಿ
ನಗುತ್ತ ಬಂದೆ ಬಿಟ್ಟಳಲ್ಲ ಭರತನಾರಿ
ಅವಳೊಂದಿಗೆ ಅವಳ ಗೆಳತಿಯರದೂ ಹಾಜರಿ
ಹೆದರಿದ ಹರಿಣಿಯಂತೆ ನೋಡದಂತೆ ನಿಂತದ್ದು ನಿಜಾರಿ ll


ಗೆಳತಿಯರಿಗೆಲ್ಲ ಪರಿಚಯ ಮಾದಿಸಿದಳಾ ನಾರಿ
ಗಗನಸಖಿಯಂತೆ ನಗುತ್ತಾ ವಿಶ್ ಮಾಡಿದೆ ಏಷ್ಟೋ ಸಾರಿ
ಮಂಟಪದ ಹಿಂದೆ ಬರಲು ಹೇಳಿ ನಡೆದಳು ಸುಕುಮಾರಿ
ಕೇಳಿ ಇಂಗು ತಿಂದ ಮಂಗನಂತಾಯ್ತು ನನ್ನ ಮಾರಿ ll


ಕಳ್ಳನಂತೆ ಹೆಜ್ಜೆ ಹಾಕುತ್ತ ಮಂಟಪದ ಹಿಂದೆ ಹೋದೆರಿ
ಹಾಡುತ್ತ ನಿಂತ ಅವಳ ಕೈಯಲ್ಲಿ ಗುಲಾಬ ಜಾಮುನರಿ
ತಾನರ್ಧ ತಿಂದು ನನಗರ್ಧ ತಿನಿಸಿದಳಾ ಕುವರಿ
ಜಾಮುನು ತುಂಬಾ ರುಚಿಯಾಗಿತ್ತ್ಯಾಕೋ ಭಗವಂತ ಬಲ್ಲಾರಿ ll


ಅಕ್ಷತೆ ಹಾಕುವಾಗ ನನ್ನ ಹತ್ತಿರ ನಿಂತಳು ಸುಂದರಿ
ಅವಳ ಗೆಳತಿಯರ ಅಕ್ಷತೆ ನಮ್ಮ ಮೇಲೆ ಸುರಿದವು ಮೂರು ಬಾರಿ
ನನಗೆ ತನ್ನ ಮೈ ಹಚ್ಚಿ ಅವಳು ನಿಂತಾಗ ಮಜಾರಿ
ಸಾವಿರ ವೋಲ್ಟ್ ಕರೆಂಟ್ ಹೊಡೆದದ್ದು ಮಾತ್ರ ಪೂರ್ತಿ ಸರಿ ll


ಯಾರಿಲ್ಲದ ರೂಮಲ್ಲಿ ಅವಳು ಮುತ್ತಿಟ್ಟಾಗ ತಬ್ಬಿಕೊಂಡೆರಿ
ಅರೆರೇ, ಮುತ್ತಿಟ್ಟರೆ ಗಲ್ಲ ಏಕೆ ತಂಪಾಯ್ತು ಅಂತ ಕಣ್ಣ ಬಿಟ್ಟೇರಿ
ನಾ ತಬ್ಬಿಕೊಂಡಿದ್ದೇನೋ ತಲೆದಿಂಬು ಅನ್ನೊದು ನಿಜಾರಿ
ಗಲ್ಲ ನೆಕ್ಕಿದ್ದು ಮಾತ್ರ ನನ್ನ ಪ್ರೀತಿಯ ಬೆಕ್ಕಿನ ಮರಿ ll