Thursday, May 2, 2019

ಹೃದಯಾಂತರಾಳದ ಮಾತು (ವಿಶ್ವನಾಥ ಬಡಿಗೇರ - ನವೆಂಬರ್ ೨೦೦೩)



ಬಳಲಿದ್ದೇನೆ…
ಹಾಂ, ಗೆಳತಿ
ನಿಜವಾಗಿಯೂ ಬಳಲಿದ್ದೇನೆ;

ಈ ಇಪ್ಪತ್ತೆರಡು ವಸಂತಗಳನ್ನು ನೋಡಿ
ಕಷ್ಟ ಸುಖಗಳ ಮಿಶ್ರಣದ ಜೀವನದಿ
ಸೋಲು ಗೆಲುವುಗಳ ಹಿಂದೆ ಓಡಿಓಡಿ,
ಒಂದು ಗೆಲುವಿಗಾಗಿ ಓಡಿಓಡಿ
ಗೆದ್ದು  ಸಂಭ್ರಮಿಸುವುದರಲ್ಲಿ ಬರುವ
ಸಮಸ್ಯೆಯ ಸರಮಾಲೆಯ  ಬೆಟ್ಟಗಳಡಿ,
ಕಾಣುವ ಪ್ರತಿ ಸುಂದರ ತರುಣಿಯ
ಕಣ್ಣ ಕಾಂತಿಯಲಿ ಜೀವನ ಸಂಗಾತಿಯ
ರೂಪ ಕಾಣುವ ಸುಮಧುರ ಹುಡುಕಾಟದಲ್ಲಿ,
ಎಲ್ಲರೂ ಜೊತೆಗಿದ್ದು, ಎಲ್ಲವೂ ಸರಿಯಾಗಿದ್ದು
ಮನದ ಯಾವುದೋ ಒಂದು ಮೂಲೆಯ
ಏಕಾಂಗಿ ಎಂಬ ವೇದನೆಯ  ಕಲ್ಪನೆಗಳಿಗಾಗಿ,
ಯೌವನದ ಮಹಾನ್  ಕಾಡಲ್ಲಿ
ಹೊತ್ತಿ ಉರಿಯುವ ಕಾಮದ ಕಾಡ್ಗಿಚ್ಚಿನ
ಶಾಖದ ಬೇಗೆಯಲಿ ಬೆಂದು,
ಬರೀ ಕತ್ತಲೆ ಎನಿಸುವ ಭವಿಷ್ಯದ
ಹಾದಿಯಲ್ಲಿ ಬೆಳ್ಳಿ ದೀಪದ ಬೆಳಕ
ಹುಡುಕಾಡುವ ನನ್ನ ಹೋರಾಟದಲ್ಲಿ.

ಆ ನಿನ್ನ ತುಟಿಯ ಮುಗುಳು ನಗೆಯೆಲ್ಲಿ
ಆ ನಿನ್ನ ಕಂಗಳ ಕಾಂತಿಯ ಹೊಳಪಲ್ಲಿ
ಆ ನಿನ್ನ ಆತ್ಮವಿಶ್ವಾಸ ತುಂಬುವ ಮಾತುಗಳಲ್ಲಿ
ಈ ನನ್ನ ಬಳಲಿದ ಜೀವಕ್ಕೆ ಜೀವವಾಗಿ
ಈ ನನ್ನ ನಿದ್ರಾವಸ್ಥೆಯ ಚಿರತೆಯ ಮನಕ್ಕೆ
ಬಡಿದೆಬ್ಬಿಸಿ, ಹೋರಾಟಕ್ಕೆ ಅಣಿಗೊಳಿಸುವ ಶಕ್ತಿ ಇದೆ.

ತಾಯಿಯ ಮಡಿಲಲ್ಲಿ ಜಗದ ಜ್ಞಾನವಿಲ್ಲದೆ
ಮಲಗಿರುವ ಮುಗ್ಧ ಮಗುವಂತೆ
ಗಾಢನಿದ್ರೆಯಲ್ಲಿ ಇರುವ ಶ್ರಮಜೀವಿಯಂತೆ
ನಿರ್ಭಯ ನಿರ್ಭೀಡೆಯಿಂದ ನಿನ್ನ ಮಡಿಲಲ್ಲಿ
ಕ್ಷಣಕಾಲ ಕಣ್ಮುಚ್ಚಿ ವಿಶ್ರಮಿಸಿ, ಮತ್ತೆ ಉತ್ಸಾಹದ
ಚಿರತೆಯಾಗಲು ನಿನ್ನ ಸಮ್ಮತಿಯಿದೆಯೇ ಯುವಗೆಳತಿ ?

No comments:

Post a Comment